ನಿನಗಾಗಿ
ಮುಗಿಲೊಳಗೆ ಅವಿತ
ಮಳೆಯಂತೆ ನೀನು
ಧಗೆಯೊಳಗೆ ಬೆಂದ
ಭುವಿಯಂತೆ ನಾನು
ತಂಗಾಳಿ ತಡವಿರುವ
ಒಲವ ಸೇತು..
ಸುತ್ತ ಮರುಭೂಮಿ
ಕರೆದಾಗ ಕಿವಿಯಾಗಿ
ನಗುವಿಗೆ ಜೊತೆಯಾಗಿ
ಮನದೊಳಗೆ ನಡೆದಾಡಿ
ಹೆಜ್ಜೆಗಳು ಸ್ಥಿರವಾಗಿ
ಚಿಗುರೊಂದು ಸಿಟಿಲೊಡೆದು
ಮಳೆಗಾಗಿ ಕಾದಿಹುದು ...
ಸುತ್ತ ಮರುಭೂಮಿ.
ಮಡಿಲೊಳಗೆ ಕರಗಿಹುದು
ಕಂಬನಿಯ ಧಾರೆ
ಕಡಲಂತೆ ಕಂಡಿಹುದು
ಜೀವ ಭಾವದ ತೊರೆ
ಬರಸೆಳೆದು ತಬ್ಬಿಹುದು
ನಿನ್ನೊಲವ ಸವಿಯ ಸೆರೆ..
ಸುತ್ತ ಮರುಭೂಮಿ
ನಿನ್ನೆದೆಯ ಪುಟದಲ್ಲಿ
ಬಿಂದುವಾದರೂ ಸಾಕು
ಕನಸ ಚಿತ್ರ ಪುಟದಲ್ಲಿ
ಸಿಂಧುವಾದರೂ ಸಾಕು
ನಿನ್ನೊಳಗೆ ನಾನಿರಲು
ತ್ರಣವು ನಾನು..
ಸುತ್ತ ಮರುಭೂಮಿ.
ಅನಿತಾ ಶೆಟ್ಟಿ ಮೂಡುಬಿದ್ರೆ
Comments
Post a Comment