ಆಕೆ ನಗಲಿಲ್ಲ
ನಾಚಿಕೆಯೇ ನಡೆಯಾಗಿ ನಡೆದಿತ್ತು ಆತನರಮನೆಗೆ/
ಸಡಗರವೇ ನಡುವಾಗಿ ಮಿಡಿದಿತ್ತು ಆತನೆಡೆಗೆ/
ಅವಮಾನ ಅನುಮಾನ ಅಡಿಮುಡಿಯ ಸುಟ್ಟಿತ್ತು/
ಮರಣಿಸಿದ ಮನದ ಜೊತೆ ಮರೆತಿರುವ ಹುಟ್ಟಿತ್ತು /
ಹಿಂದಡಿಯ ಅಚ್ಚಿನಲ್ಲಿ ಮುಂದಡಿಯ ಮರೆತ ಶಾಪ/
ಆತನಿಗದು ವರವು ನಿಜ ಅವ ಅವನಿಯ ಅಧಿಪ/
ನಿಟ್ಟುಸಿರು ಬರಸಿಡಿಲು ಜೊತೆಗೆ ಪಯಣ/
ಉಸಿರೊಂದೆ ಮಿಸುಕಾಡಿ ಹಾಡಿ ತನನ//
ಮಿದು ಕಂದ ಭರತನ ಅಳುವನ್ನು ಲೆಕ್ಕಿಸಲಿಲ್ಲ/
ಹುಲಿ ಮರಿಗಳ ಮಧ್ಯೆ ಬಿಟ್ಟಾಗಲು ಮಿಸುಕಲಿಲ್ಲ /
ಪರಚುಗಾಯದಿ ರಕ್ತ ಒಸರಿದಾಗಲೂ ಉಸುರಲಿಲ್ಲ /
ಕಾನು ನೀನೊಂಟಿ ಎಂದು ಕಿಸಿದರೂ ಕುಸಿಯಲಿಲ್ಲ /
ಮಲ್ಲಿಗೆಯರಳು ಮೊಟಕಿ ಮಿಡುಕಿದರೂ ದಣಿಯಲಿಲ್ಲ /
ಭರತ ಭಟನಾಗಿ ಹುಲಿಯಾಗಿ ಗುಟುರು ಹಾಕುವವರೆಗೆ/
ಶಕುಂತಲೆ ಮೌನಿ .. ಮಹಾ ಮೌನಿ ಮತ್ತೆ ಅಳಲಿಲ್ಲ/
ಪ್ರೇಮಿ ದುಶ್ಯಂತನ ಆಲಿಂಗನಕೂ ಆಕೆ ಮತ್ತೆ ನಗಲಿಲ್ಲ//
ಅನಿತಾ ಶೆಟ್ಟಿ ಮೂಡುಬಿದ್ರೆ
Comments
Post a Comment