ನನ್ನ ದೇಶಕತೆ
ಬಂಧು ಬಾಂಧುರತೆ ಸಿಂಧು ಸೋದರತೆ
ಒಂದು ಭಾವಲತೆ ನನ್ನ ದೇಶ ಕತೆ
ಚೆಲುವ ಚಂದ್ರಿಕೆ ಒಲವ ಮುದ್ರಿಕೆ
ನಿತ್ಯ ಹರುಷವೆ ಹಸಿರ ಸಿರಿಯೊಳು
ಹಲವು ಭಾಷೆಗೂ ನಿಲುವ ವೇಷಕೂ
ಸತ್ಯ ತವರಿದು ಉಸಿರ ಪರಿಯೊಳು //೧//
ಬುದ್ಧ ಬರೆದಿಹ ಸಿಧ್ಧ ಮಂತ್ರವೇ
ನನ್ನ ದೇಶದ ತತ್ವವು
ಯುದ್ಧ ಮರೆತಿಹ ಬದ್ಧ ತಂತ್ರವು
'ನಿಶಸ್ತ್ರ' ಜಗವು ಮೆಚ್ಚಿದ ಸತ್ವವು//೨//
ಹಿಮದಿ ಮೊರೆಯುವ ಮೌನ ಗಾನಕೆ
ಮಾತೆ ಸೆರಗದು ರಕ್ಷೆಯು
ಮಲಿನ ಮದವಿರೆ ಮತಿಗೆ ವಿಹಿತವು
ಮರೆತು ಉಳಿಯದು ದುರಿತವು//೩//
ಮನುಜ ಮತವನು ವಿಶ್ವ ಪಥದಲಿ
ತೆರೆದು ತೋರಿದ ರೋಮ ಗರ್ಭವು
ಮಣ್ಣ ಕಣದಲಿ ತನ್ನತನವನ್ನು
ಮೆರೆದು ಸಾರಿದ ರಾಮ ರಾಜ್ಯವು//೪//
ರಚನೆ: ಅನಿತಾ ಶೆಟ್ಟಿ
ಮೂಡುಬಿದಿರೆ
Comments
Post a Comment