Posts

ಆಕೆ ನಗಲಿಲ್ಲ

ನಾಚಿಕೆಯೇ ನಡೆಯಾಗಿ ನಡೆದಿತ್ತು ಆತನರಮನೆಗೆ/ ಸಡಗರವೇ ನಡುವಾಗಿ ಮಿಡಿದಿತ್ತು ಆತನೆಡೆಗೆ/ ಅವಮಾನ ಅನುಮಾನ ಅಡಿಮುಡಿಯ ಸುಟ್ಟಿತ್ತು/ ಮರಣಿಸಿದ ಮನದ ಜೊತೆ ಮರೆತಿರುವ ಹುಟ್ಟಿತ್ತು / ಹಿಂದಡಿಯ ಅಚ್ಚಿನಲ್ಲಿ ಮುಂದಡಿಯ ಮರೆತ ಶಾಪ/ ಆತನಿಗದು ವರವು ನಿಜ ಅವ ಅವನಿಯ ಅಧಿಪ/ ನಿಟ್ಟುಸಿರು ಬರಸಿಡಿಲು ಜೊತೆಗೆ ಪಯಣ/ ಉಸಿರೊಂದೆ ಮಿಸುಕಾಡಿ ಹಾಡಿ ತನನ// ಮಿದು ಕಂದ ಭರತನ ಅಳುವನ್ನು ಲೆಕ್ಕಿಸಲಿಲ್ಲ/  ಹುಲಿ ಮರಿಗಳ ಮಧ್ಯೆ ಬಿಟ್ಟಾಗಲು ಮಿಸುಕಲಿಲ್ಲ /  ಪರಚುಗಾಯದಿ ರಕ್ತ ಒಸರಿದಾಗಲೂ ಉಸುರಲಿಲ್ಲ / ಕಾನು ನೀನೊಂಟಿ  ಎಂದು ಕಿಸಿದರೂ ಕುಸಿಯಲಿಲ್ಲ / ಮಲ್ಲಿಗೆಯರಳು ಮೊಟಕಿ ಮಿಡುಕಿದರೂ ದಣಿಯಲಿಲ್ಲ / ಭರತ ಭಟನಾಗಿ ಹುಲಿಯಾಗಿ ಗುಟುರು ಹಾಕುವವರೆಗೆ/  ಶಕುಂತಲೆ ಮೌನಿ .. ಮಹಾ ಮೌನಿ ಮತ್ತೆ ಅಳಲಿಲ್ಲ/ ಪ್ರೇಮಿ ದುಶ್ಯಂತನ ಆಲಿಂಗನಕೂ ಆಕೆ ಮತ್ತೆ ನಗಲಿಲ್ಲ//                                   ಅನಿತಾ ಶೆಟ್ಟಿ ಮೂಡುಬಿದ್ರೆ 

ನನ್ನ ದೇಶಕತೆ

ಬಂಧು ಬಾಂಧುರತೆ ಸಿಂಧು ಸೋದರತೆ  ಒಂದು ಭಾವಲತೆ ನನ್ನ ದೇಶ ಕತೆ ಚೆಲುವ ಚಂದ್ರಿಕೆ ಒಲವ ಮುದ್ರಿಕೆ ನಿತ್ಯ ಹರುಷವೆ ಹಸಿರ ಸಿರಿಯೊಳು ಹಲವು ಭಾಷೆಗೂ ನಿಲುವ ವೇಷಕೂ ಸತ್ಯ ತವರಿದು ಉಸಿರ ಪರಿಯೊಳು //೧// ಬುದ್ಧ ಬರೆದಿಹ ಸಿಧ್ಧ ಮಂತ್ರವೇ  ನನ್ನ ದೇಶದ ತತ್ವವು ಯುದ್ಧ ಮರೆತಿಹ ಬದ್ಧ ತಂತ್ರವು 'ನಿಶಸ್ತ್ರ' ಜಗವು ಮೆಚ್ಚಿದ ಸತ್ವವು//೨// ಹಿಮದಿ ಮೊರೆಯುವ ಮೌನ ಗಾನಕೆ  ಮಾತೆ ಸೆರಗದು ರಕ್ಷೆಯು ಮಲಿನ ಮದವಿರೆ ಮತಿಗೆ ವಿಹಿತವು  ಮರೆತು ಉಳಿಯದು ದುರಿತವು//೩// ಮನುಜ ಮತವನು ವಿಶ್ವ ಪಥದಲಿ ತೆರೆದು ತೋರಿದ ರೋಮ ಗರ್ಭವು ಮಣ್ಣ ಕಣದಲಿ ತನ್ನತನವನ್ನು ಮೆರೆದು ಸಾರಿದ ರಾಮ ರಾಜ್ಯವು//೪//                            ರಚನೆ: ಅನಿತಾ ಶೆಟ್ಟಿ                                     ಮೂಡುಬಿದಿರೆ

ನಿನಗಾಗಿ

ಮುಗಿಲೊಳಗೆ ಅವಿತ  ಮಳೆಯಂತೆ ನೀನು ಧಗೆಯೊಳಗೆ ಬೆಂದ  ಭುವಿಯಂತೆ ನಾನು ತಂಗಾಳಿ ತಡವಿರುವ ಒಲವ ಸೇತು.. ಸುತ್ತ ಮರುಭೂಮಿ ಕರೆದಾಗ ಕಿವಿಯಾಗಿ ನಗುವಿಗೆ ಜೊತೆಯಾಗಿ ಮನದೊಳಗೆ ನಡೆದಾಡಿ ಹೆಜ್ಜೆಗಳು ಸ್ಥಿರವಾಗಿ ಚಿಗುರೊಂದು ಸಿಟಿಲೊಡೆದು ಮಳೆಗಾಗಿ ಕಾದಿಹುದು ... ಸುತ್ತ ಮರುಭೂಮಿ. ಮಡಿಲೊಳಗೆ ಕರಗಿಹುದು ಕಂಬನಿಯ ಧಾರೆ ಕಡಲಂತೆ ಕಂಡಿಹುದು ಜೀವ ಭಾವದ ತೊರೆ ಬರಸೆಳೆದು ತಬ್ಬಿಹುದು ನಿನ್ನೊಲವ  ಸವಿಯ ಸೆರೆ.. ಸುತ್ತ ಮರುಭೂಮಿ ನಿನ್ನೆದೆಯ ಪುಟದಲ್ಲಿ ಬಿಂದುವಾದರೂ ಸಾಕು ಕನಸ ಚಿತ್ರ ಪುಟದಲ್ಲಿ ಸಿಂಧುವಾದರೂ ಸಾಕು ನಿನ್ನೊಳಗೆ ನಾನಿರಲು ತ್ರಣವು ನಾನು.. ಸುತ್ತ ಮರುಭೂಮಿ. ಅನಿತಾ ಶೆಟ್ಟಿ ಮೂಡುಬಿದ್ರೆ